
ಸುಬ್ರಹ್ಮಣ್ಯ (ಡಿ.24) : ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯದ 2015-2016 ನೇ ಸಾಲಿನ ಹಿರಿಯ ವಿದ್ಯಾರ್ಥಿವೃಂದ ನಮ್ಮ ಬಿ.ಎ ಬಳಗ ದ 7ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ದಿನಾಂಕ:24/12/2023 ರಂದು ನಮ್ಮ ಬಿ.ಎ. ಬಳಗದ ಸದಸ್ಯೆ ಲತಾ ಕುಲ್ಕುಂದ ಅವರ ಶಿವ ಸ್ಕಂದ ನಿಲಯದಲ್ಲಿ ನಡೆಯಿತು.
ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಹರಟೆ ತಮಾಷೆಗಳೊಂದಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನದ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಚಿರಪರಿಚಿತವಾಗಿರುವ, ಬಡವರ ಹಾಗೂ ಅನಾಥರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ “ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ )ಗೆ” ನಮ್ಮ ಬಿ.ಎ. ಬಳಗದ ವತಿಯಿಂದ 25,000/ ರೂಪಾಯಿಯ ಧನಸಹಾಯವನ್ನು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಅವರಿಗೆ ಹಸ್ತಾಂತರಿಸಲಾಯಿತು.
ಧನಸಹಾಯ ಸ್ವೀಕರಿಸಿ ಮಾತನಾಡಿದ ಅವರು ‘ನಮ್ಮ ಬಿ.ಎ ಬಳಗದ’ ಕಾರ್ಯ ಚಟುವಟಿಕೆಗಳು ಎಲ್ಲರಿಗೂ ಪ್ರೇರಣೆಯಾಗಲಿ, ಮುಂದಿನ ದಿನಗಳಲ್ಲಿ ಈ ಗೆಳೆಯರ ಬಳಗವು ಇನ್ನಷ್ಟು ಗಟ್ಟಿಯಾಗಿ ಸಮಾಜ ಸೇವೆಯಲ್ಲಿ ತೊಡಗಲಿ, ಎಂದು ಹಾರೈಸಿ ಸಂಘಟನೆ ನೀಡಿದ ಧನಸಹಾಯವನ್ನು ಖಂಡಿತವಾಗಿಯೂ ಬಡವರ ಏಳಿಗೆಗೆ ಬಳಕೆ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಎಸ್.ಎಸ್. ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರಸಾದ್ ಎನ್, ಅರ್ಥಶಾಸ್ತ್ರ ಉಪನ್ಯಾಸಕಿಯಾದ ಶ್ರೀಲತಾ ಕಮಿಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೂ ಕಾರ್ಯಕ್ರಮಕ್ಕೆ ಸ್ಥಳವಕಾಶ ಮಾಡಿಕೊಟ್ಟ ಮನೆಯವರಾದ ಶ್ರೀಮತಿ ಮತ್ತು ಶ್ರೀ ಬಾಬುಗೌಡ, ಜೆಸಿಐ ಪೂರ್ವ ಅಧ್ಯಕ್ಷರಾದ ಮಣಿಕಂಠ ಹಾಗೂ ನಮ್ಮ ಬಿ.ಎ ಬಳಗದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು. ದೀಪಕ್ ನಂಬಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಪದ್ಮ ಕುಮಾರ್ ಗುಂಡಡ್ಕ ಸ್ವಾಗತಿಸಿದರು, ಧನಂಜಯ ಕೊಡೆಂಕಿರಿ ವಂದನಾರ್ಪಣೆಗೈದರು.
ಕಾರ್ಯಕ್ರಮದ ನಂತರ ಸಹ ಭೋಜನ ಹಾಗೂ ಸಂಘಟನೆಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.